Monday, November 29, 2010

ಇನ್ನು ಹುಟ್ಟದ ನನ್ನ ಮಗಳು...

ನನ್ನ ಮಗಳು ಇನ್ನು ಹುಟ್ಟಿಲ್ಲ.
ಆಗಲೇ ಅವಳ ಆಟ ಶುರುವಾಗಿದೆ.
ಹಾಗಂತ ನನ್ನವಳು ಗರ್ಭಿಣಿ ಅಂತ
ಭಾವಿಸಬೇಡಿ. ನನ್ನ ಮಗಳು ಇನ್ನು
ನನ್ನಲಿಯೇ ಇದ್ದಾಳೆ. ಅಮ್ಮನ ಸೇರುವ
ಕಾತರದಲ್ಲಿ ಕಾಯುತ್ತಿದ್ದಾಳೆ...

ನನ್ನ
ಮಗಳು ನನ್ನಲಿಯೇ ಇದ್ದಾಳೆ.
ಇಲ್ಲ...ಸಲ್ಲದ ಆಸೆ ಹುಟ್ಟುಸುತ್ತಿದ್ದಾಳೆ.
ಹೋದಲ್ಲಿ. ಬಂದಲ್ಲಿ ಅದು ಬೇಕು.
ಇದು ಬೇಕು ಅಂತ ನನಗೆ ಕೊಡಿಸುವ
ಆಸೆ ಹೆಚ್ಚಿಸುತ್ತಿದ್ದಾಳೆ...

ನನ್ನ
ಮಗಳು ನನ್ನ ಕಾಡುತ್ತಾಳೆ.
ಅಪ್ಪ ಅನ್ನದಿದ್ದರೂ ಅಮ್ಮ ಅನ್ನದೇ
ಇದ್ದರೂ ಚೇಷ್ಟೆ ಮಾಡುತ್ತಾಳೆ.
ಬೇಡವೆಂದರೂ ದೊಡ್ಡ ಕನಸು ಹುಟ್ಟಿಸುತ್ತಿದ್ದಾಳೆ.
ನನ್ನ ಮಗಳು ನನ್ನ ಎದೆಯಲ್ಲಿ ಮುಗುಳು ನಕ್ಕು
ಉಸಿರಿಗೆ ಜೀವದ ಗಾಳಿ ತುಂಬುತ್ತಿದ್ದಾಳೆ...

ನನ್ನ
ಮಗಳು ಯಾವಾಗ ಬರುತ್ತಾಳೊ ಗೊತ್ತಿಲ್ಲ.
ನಿರಾಸೆ ಮಾಡೋದಿಲ್ಲ ಎಂಬ ನಂಬಿಕೆ ಇದೆ.
ಅದೇ ಹಾದಿಯಲ್ಲಿ ನಾನು ಈಗ ವೇಟಿಂಗ್...

-ರೇವನ್

Wednesday, November 24, 2010

ಕೋಗಿಲೆಯ ಹಾಡ ಕೇಳಿದೆ...

ಕೋಗಿಲೆಯ ಕವಿತೆ ಕೇಳಿದೆ
ಆಗ ನಿನ್ನೊಲವಿನ ಭಾವ
ನನ್ನೆದಯಲ್ಲಿ ಮೂಡಿತು...

ಕೋಗಿಲೆಯ
ಸ್ವರವ ಆಸ್ವಾದಿಸಿದೆ
ಆಗ ನಿನ್ನ ಬದುಕಿನ ಜೀವ ಸ್ವರ
ನನ್ನೆದೆಯಲ್ಲಿ ಮೀಟಿತು...

ಕೋಗಿಲೆಯ
ಆಲಾಪ ಕೇಳಿದೆ
ಆಗ ನೀ ಕೊಟ್ಟ ಪ್ರೀತಿಯ ಕೂಗು
ನನ್ನಲ್ಲಿ ಸಂಗೀತ ಸ್ವರ ಹೊಮ್ಮಿಸಿತು...

ಕೋಗಿಲೆಯ
ಮೌನ ಅನುಭವಿಸಿದೆ
ಆಗ ನೀ ನೆನಪಾದೆ. ನಿನ್ನ ನೋವು
ನೆನಪಾದವು...

ಕೋಗಿಲೆಯ ಬಣ್ಣ ನೋಡಿದೆ
ಆಗ ನೀ ದೂರವಾದ ಆ ಕರಾಳ
ದಿನ ಮತ್ತಷ್ಟು...ಇನ್ನಷ್ಟು ಕಗ್ಗತ್ತಲಾಯಿತು..

-ರೇವನ್

Tuesday, November 2, 2010

ನನ್ನ ಕನ್ನಡ...

ನನ್ನ ಭಾಷೆ ಕನ್ನಡ.
ಆದ್ರೆ, ಗೊತ್ತಿಲ್ಲ ನನಗೆ
ಹೆಚ್ಚು ಸಾಹಿತಿಕ ಪರಿಚಯ...

ಬಳಿಸಿದ ಪದಗಳಲ್ಲಿ
ಆಡು ಭಾಷೆಯ ಒಂದಾದರೂ
ಪದ ಜಾಗ ಮಾಡಿಕೊಂಡು ಬಿಡುತ್ತದೆ.
ಇಲ್ಲವೇ ಇರೋ ಪದಗಳೇ ನನ್ನ
ಶೈಲಿಯಲ್ಲಿ ಬದಲಾಗುತ್ತವೆ.

ನನಗೆ ಕನ್ನಡ ಇಷ್ಟ. ಆಡು ಭಾಷೆ
ಅಂದ್ರೆ ತುಂಬಾ ಪ್ರೀತಿ. ಅದಕ್ಕೆ
ನನ್ನ ಉತ್ತರ ಕರ್ನಾಟಕದ ಭಾಷೆ
ನಾಲಿಗೆ ಮೇಲೆ ನಲಿಯುತ್ತದೆ. ಕೇಳುಗರನ್ನೂ
ನಲಿಸುತ್ತದೆ...ಇದುವೇ ನನ್ನ ಕನ್ನಡ..ನನ್ನ ಚೆಲುವ
ಕನ್ನಡ...

- ರೇವನ್ ಪಿ.ಜೇವೂರ್