Thursday, December 16, 2010

ಪ್ರಣಯ ಪಯಣ...

ನನ್ನ ಜೊತೆ ನಿನ್ನ ಉಸಿರು.
ನಿನ್ನ ಜೊತೆ ನನ್ನ ಉಸಿರು.
ಇದುವೇ ನಮ್ಮ ಒಲವ ಬಸಿರು...

ನಿನ್ನಲ್ಲಿ
ಸಣ್ಣ ಮಿಸುಕಾಟ.
ನನ್ನಲ್ಲಿ ದೊಡ್ಡ ಉಲ್ಲಾಸ.
ಇದುವೇ ಅಲ್ಲವೆ ನಮ್ಮ ಬಾಳ ಗರ್ಭ...

ಹಲವು ಬಯಕೆಗಳು ನಿನ್ನಲ್ಲಿ.
ಈಡೇರಿಸುವ ಹುಮ್ಮಸ್ಸು ನನ್ನಲ್ಲಿ.
ಇದುವೇ ಅಲ್ಲವೆ ನವ ಜನ್ಮದ ಮೋಡಿ...

ಇಷ್ಟು ಸಾಕು ಕನಸು. ಇನ್ನೂ ದೂರವಿದೆ
ಹೊಸತು. ಕಾಯಬೇಕು ನಾನು-ನೀನು.
ಇದುವೇ ಅಲ್ಲವೆ ನಮ್ಮ ಪ್ರಣಯ ಪಯಣ...

-ರೇವನ್

Monday, December 6, 2010

ಒಲ್ಲೆ ಅಂದವಳು....

ಕವಿತೆ ಬರೆಯುವೆ ನಿನಗಾಗಿ
ಹಾಡೂ ಹಾಡುವೆ ಒಲವಿಗಾಗಿ
ಒಲ್ಲೆ ಅಂದವಳು ನೀನೆ ಅಲ್ಲವೇ...

ಬಾಳ
ಬೆಳದಿಂಗಳಲ್ಲಿ ಚಿತ್ತಾರ
ಮೂಡಿಸುವೆ ಕತ್ತಲಲ್ಲೂ ನೀನ್ನೆ
ನೋಡುವೆ ಮುಸ್ಸಂಜೆಯಲ್ಲೂ
ನಿನ್ನೇ ಕಾಣುವೆ. ದೂರವಿರು ಅಂದವಳೂ
ನೀನೆ ಅಲ್ಲವೇ..

ಉಸಿರ ವರತೆಯಲ್ಲಿ ನಿನ್ನ ನಿರೀಕ್ಷೆನೆ ಇದೆ
ಮನದ ಗೂಡಲ್ಲಿ ನಿನ್ನದೇ ನೋವಿದೆ
ಕೇಳಿ ಸುಮ್ಮನಿರುವವಳು ನೀನೆ ಅಲ್ಲವೇ...

ಬೇಡ
ಚೆಲುವೆ ನೀನು ನೀನಾಗಿರು ನಾನು
ನಾನಾಗಿರುವೆ ನಮಗೇಕೆ ಬೇಕು ಪ್ರೀತಿಯ
ವ್ಯವಹಾರ ಅದು ಪ್ರೇಮಿಗಳಿಗಲ್ಲವೇ...
ನಾವಂತು ಇನ್ನೂ ಅರ್ಥ ಮಾಡಿಕೊಳ್ಳದ
ಸ್ನೇಹಿತರಲ್ಲವೇ....

-ರೇವನ್

Monday, November 29, 2010

ಇನ್ನು ಹುಟ್ಟದ ನನ್ನ ಮಗಳು...

ನನ್ನ ಮಗಳು ಇನ್ನು ಹುಟ್ಟಿಲ್ಲ.
ಆಗಲೇ ಅವಳ ಆಟ ಶುರುವಾಗಿದೆ.
ಹಾಗಂತ ನನ್ನವಳು ಗರ್ಭಿಣಿ ಅಂತ
ಭಾವಿಸಬೇಡಿ. ನನ್ನ ಮಗಳು ಇನ್ನು
ನನ್ನಲಿಯೇ ಇದ್ದಾಳೆ. ಅಮ್ಮನ ಸೇರುವ
ಕಾತರದಲ್ಲಿ ಕಾಯುತ್ತಿದ್ದಾಳೆ...

ನನ್ನ
ಮಗಳು ನನ್ನಲಿಯೇ ಇದ್ದಾಳೆ.
ಇಲ್ಲ...ಸಲ್ಲದ ಆಸೆ ಹುಟ್ಟುಸುತ್ತಿದ್ದಾಳೆ.
ಹೋದಲ್ಲಿ. ಬಂದಲ್ಲಿ ಅದು ಬೇಕು.
ಇದು ಬೇಕು ಅಂತ ನನಗೆ ಕೊಡಿಸುವ
ಆಸೆ ಹೆಚ್ಚಿಸುತ್ತಿದ್ದಾಳೆ...

ನನ್ನ
ಮಗಳು ನನ್ನ ಕಾಡುತ್ತಾಳೆ.
ಅಪ್ಪ ಅನ್ನದಿದ್ದರೂ ಅಮ್ಮ ಅನ್ನದೇ
ಇದ್ದರೂ ಚೇಷ್ಟೆ ಮಾಡುತ್ತಾಳೆ.
ಬೇಡವೆಂದರೂ ದೊಡ್ಡ ಕನಸು ಹುಟ್ಟಿಸುತ್ತಿದ್ದಾಳೆ.
ನನ್ನ ಮಗಳು ನನ್ನ ಎದೆಯಲ್ಲಿ ಮುಗುಳು ನಕ್ಕು
ಉಸಿರಿಗೆ ಜೀವದ ಗಾಳಿ ತುಂಬುತ್ತಿದ್ದಾಳೆ...

ನನ್ನ
ಮಗಳು ಯಾವಾಗ ಬರುತ್ತಾಳೊ ಗೊತ್ತಿಲ್ಲ.
ನಿರಾಸೆ ಮಾಡೋದಿಲ್ಲ ಎಂಬ ನಂಬಿಕೆ ಇದೆ.
ಅದೇ ಹಾದಿಯಲ್ಲಿ ನಾನು ಈಗ ವೇಟಿಂಗ್...

-ರೇವನ್

Wednesday, November 24, 2010

ಕೋಗಿಲೆಯ ಹಾಡ ಕೇಳಿದೆ...

ಕೋಗಿಲೆಯ ಕವಿತೆ ಕೇಳಿದೆ
ಆಗ ನಿನ್ನೊಲವಿನ ಭಾವ
ನನ್ನೆದಯಲ್ಲಿ ಮೂಡಿತು...

ಕೋಗಿಲೆಯ
ಸ್ವರವ ಆಸ್ವಾದಿಸಿದೆ
ಆಗ ನಿನ್ನ ಬದುಕಿನ ಜೀವ ಸ್ವರ
ನನ್ನೆದೆಯಲ್ಲಿ ಮೀಟಿತು...

ಕೋಗಿಲೆಯ
ಆಲಾಪ ಕೇಳಿದೆ
ಆಗ ನೀ ಕೊಟ್ಟ ಪ್ರೀತಿಯ ಕೂಗು
ನನ್ನಲ್ಲಿ ಸಂಗೀತ ಸ್ವರ ಹೊಮ್ಮಿಸಿತು...

ಕೋಗಿಲೆಯ
ಮೌನ ಅನುಭವಿಸಿದೆ
ಆಗ ನೀ ನೆನಪಾದೆ. ನಿನ್ನ ನೋವು
ನೆನಪಾದವು...

ಕೋಗಿಲೆಯ ಬಣ್ಣ ನೋಡಿದೆ
ಆಗ ನೀ ದೂರವಾದ ಆ ಕರಾಳ
ದಿನ ಮತ್ತಷ್ಟು...ಇನ್ನಷ್ಟು ಕಗ್ಗತ್ತಲಾಯಿತು..

-ರೇವನ್

Tuesday, November 2, 2010

ನನ್ನ ಕನ್ನಡ...

ನನ್ನ ಭಾಷೆ ಕನ್ನಡ.
ಆದ್ರೆ, ಗೊತ್ತಿಲ್ಲ ನನಗೆ
ಹೆಚ್ಚು ಸಾಹಿತಿಕ ಪರಿಚಯ...

ಬಳಿಸಿದ ಪದಗಳಲ್ಲಿ
ಆಡು ಭಾಷೆಯ ಒಂದಾದರೂ
ಪದ ಜಾಗ ಮಾಡಿಕೊಂಡು ಬಿಡುತ್ತದೆ.
ಇಲ್ಲವೇ ಇರೋ ಪದಗಳೇ ನನ್ನ
ಶೈಲಿಯಲ್ಲಿ ಬದಲಾಗುತ್ತವೆ.

ನನಗೆ ಕನ್ನಡ ಇಷ್ಟ. ಆಡು ಭಾಷೆ
ಅಂದ್ರೆ ತುಂಬಾ ಪ್ರೀತಿ. ಅದಕ್ಕೆ
ನನ್ನ ಉತ್ತರ ಕರ್ನಾಟಕದ ಭಾಷೆ
ನಾಲಿಗೆ ಮೇಲೆ ನಲಿಯುತ್ತದೆ. ಕೇಳುಗರನ್ನೂ
ನಲಿಸುತ್ತದೆ...ಇದುವೇ ನನ್ನ ಕನ್ನಡ..ನನ್ನ ಚೆಲುವ
ಕನ್ನಡ...

- ರೇವನ್ ಪಿ.ಜೇವೂರ್

Sunday, October 31, 2010

ಅವಳ ಕಂಡೆ...

ನೋವಲ್ಲಿ ಅವಳ ಕಂಡೆ.
ಮನದಲ್ಲಿ ಸಂತೋಷ ಕಂಡೆ.
ಏಕೋ ಏನೋ ನಾ ಕಾಣೆ...

ಎಲ್ಲಲ್ಲೂ
ಅವಳದ್ದೇ ನೆನಪು.
ನನ್ನಲ್ಲೂ ಅವಳ್ಳದ್ದೇ ಕನಸು
ಏಕೋ ಏನೋ ನಾ ಕಾಣೆ....

ಇನ್ನ್ಯಾರದೋ
ಕಂಗಳಲ್ಲಿ
ಅವಳ ಪ್ರತಿ ಬಿಂಬ ಕಂಡೆ
ನನ್ನ ಕಣ್ಣಲ್ಲೂ ಅವಳ ಕಾಣುವ
ಸಾಹಸ ಮಾಡಿದೆ.
ಏಕೋ ಏನೋ ನಾ ಕಾಣೆ...

ಅವಳನ್ನ
ಕಣ್ಣು ತುಂಬಿಕೊಳ್ಳಲು
ನಾ ಹೋದೆ..ಆದ್ರೆ, ಕನಸಲ್ಲಿ
ಬಂದವಳು ಕಣ್ಮುಂದೆ ಕಾಣಲೇ
ಇಲ್ಲ. ಏಕೋ ಏನೋ..ನಾ ಕಾಣೆ..

-ರೇವನ್ ಪಿ.ಜೇವೂರ್

Saturday, October 16, 2010

ನಾ ಮೌನವಾಗುವ ಮೊದಲು...

ನನಗೆ ಹಾಡು ಬರೋದಿಲ್ಲ. ನಿನಗೆ
ಮಾತು ಬರೋದಿಲ್ಲ. ನನ್ನ ಪ್ರಯತ್ನ ನಡೆದಿದೆ.
ನಿನ್ನ ಪ್ರಯತ್ನವಂತೂ ಇಲ್ಲವೇ ಇಲ್ಲ..

ಮೌನವಾದರೆ ಹೇಗೆ ಒಲವೆ. ನಾನಿಲ್ಲವೆ
ನಿನ್ನ ಬಳಿಯೆ. ಮಾತನಾಡು ಒಮ್ಮೆಯಾದರು.
ಕೇಳಿ ಜೀವ ಸಾಗಿಸುವೆ. ನಿನಗಾಗಿಯೇ...

ನಾ ಕಲಿತ ಮಾತು ನಿನ್ನವೆ ಅಲ್ಲವೆ. ನನ್ನಿಂದಾದ
ಮುನಿಸು ಇನ್ನು ಹೋಗಿಲ್ಲವೆ. ವರುಷ ಉರುಳಿ
ಮಕ್ಕಳು ದೊಡ್ಡವಾದವು. ಇನ್ನು ಹೋಗಿಲ್ಲವೇ
ಸಿಟ್ಟು ನನ್ನ ಮೌನಗೌರಿಯೇ...

ಮಾತನಾಡು ನಾ ಮೌನವಾಗುವ ಮೊದಲು...
ನಾ ಮೌನವಾಗುವ ಮೊದಲು....

- ರೇವನ್ ಪಿ.ಜೇವೂರ್

Sunday, August 8, 2010

ಜಾರಿ ಬಿದ್ದ ಜಾಣ...

ಜಾರಿ ಬಿದ್ದ ಜಾಣ...
ಎಲ್ಲಿ ಹೋದೆಯಾ...
ಮರೆತು ಹೋದ ಆ ಕ್ಷಣ
ನೆನೆದು ಇನ್ನೆಲ್ಲಿ ಮರೆಯಾದೆಯಾ...

ಜಾರಿ ಬಿದ್ದ ಜಾಣ
ಏಕೆ ಹೋದೆಯಾ...
ನಿನ್ನ ಆ ಮೋಹದಿ ಕಳೆದು
ಹೋದೆನಾನು...

ಜಾರಿ ಬಿದ್ದ ಜಾಣ
ಯಾರೊಟ್ಟಿಗೆ ಹೋದೆಯಾ..

ನನ್ನ ಕಂಡು ನೀನೆಕೆ ಮರೆಯಾದೆಯಾ
ಜಾರಿ ಬಿದ್ದ ಜಾಣ ನನ್ನ ಪಾತಾಳಕ್ಕೆ
ತಳ್ಳಿ ನೀನೆಕೆ ಹೋದೆಯಾ...

- ರೇವನ್

Sunday, August 1, 2010

ಯಾಕೋ ನೀ ಹಿಂಗೆ

ಮನಸ್ಸು ಅಷ್ಟೇಕೆ ಮೃದು.
ಅದೇನೋ ತಾಕಿದರೆ ಮುಗಿಯಿತು.
ಇನ್ನಿಲ್ಲದ ದು:ಖ ಆವರಿಸಿ ಬಿಡುತ್ತದೆ.

ಅಂದದ ಜಗತ್ತು ಕಂಡಾಗ ನವೋ
ಉಲ್ಲಾಸದ ಬುಗ್ಗೇನೆ ಆಗಿ ಬಿಡುತ್ತದೆ.

ಇನ್ನು ಸಂಗೀತವೋ. ಇದರ ಒಂದೇ
ಲಹರಿಗೆ ಮನದಲ್ಲಿ ಶಾಶ್ವತ ಮಿಡಿತವೇ
ಬಿಡಿ. ಯಾವುದೇ ಗೀತೆಯಿರಲಿ.ಒಂಚೂರು
ತಟ್ಟಿದರಾಯಿತು. ಎಲ್ಲೋ ಕಳೆದು ಹೋಗುವ
ಮಂಕು ಮನಸ್ಸಿದು.

ಮನಸ್ಸು ಗಟ್ಟಿಯಾಗ್ತಾನೇ ಇಲ್ಲ. ಹಾಗೆ ಆದ್ರೂ
ಅದು ಸರಿ ಹೋಗೋಲ್ಲ. ಕಾರಣ ಮನದಾಳ
ಸದಾ ಹೊಸತನ್ನ ಬೇಡುತ್ತಿದೆ...

- ರೇವನ್

Monday, July 26, 2010

ಬೇಡವೆಂದರೂ ಕಾಡುವ ನೋವು...

ತಂಪು ಗಾಳಿ ನನಗೆ ಆಗೋದಿಲ್ಲ.
ತಂಗಾಳಿ ಬೀಸಿದಾಗ ನೆನಪುಗಳು
ತಾಜಾ ಆಗುತ್ತದೆ. ಗಾಳಿಯಂತೇನೆ
ಹಳೆ ನೋವುಗಳು ಮತ್ತೆ ಕನಲುತ್ತವೆ.

ತಂಗಾಳಿ ಅಷ್ಟೇ,ಅಲ್ಲ. ಪ್ರತಿ ವರ್ಷದ
ಪ್ರತಿ ವೃತು ನೋವುಂಟು ಮಾಡುತ್ತದೆ
ಮಳೆ ಬಂದರೆ, ಶಾಲಾದಿನಗಳು
ಕಾಡುತ್ತವೆ. ಚಳಿಗಾಳ ಬಂದ್ರೆ
ಮುಗಿಯಿತು. ಶಾಲೆಯ ತಣ್ಣನೆಯ ಬೆಂಚು.
ಅಮ್ಮನ ನೆನಪು. ಮನೆಕಡೆ ಓಡಿ ಹೋಗಬೇಕೆನ್ನುವ
ಸೆಳೆತ ಮನದಲ್ಲಿ ಮೂಡುತ್ತದೆ

ಬೇಸಿಗೆ ಬಂದರೂ ಇದೇ ರೀತಿಯ ಅನುಭವ
ನೋವಿಲ್ಲದೇ ಇದ್ದರೂ ನಿದ್ಧೆ ಇರದ ಆ ದಿನಗಳು
ಕಣ್ಮುಂದೆ ಬರುತ್ತವೆ. ಹೀಗೆಕೆ ಆಗ್ತದೋ..ಇಲ್ಲಿವರೆಗೂ
ಅರ್ಥವಾಗಿಲ್ಲ. ವಯಸ್ಸು ೩೩ ಆಯಿತು. ಮಳೆ ಬರುತ್ತದೆ
ಚಳಿ ಬರುತ್ತದೆ. ತಂಗಾಳಿ ಬೀಸುತ್ತದೆ. ನನ್ನ ನೆನಪು
ಬದಲಾಗುತ್ತಿಲ್ಲ...

- ರೇವನ್

Wednesday, July 7, 2010

ಚುಕ್ಕಿ...

ಚುಕ್ಕಿ ಮೂಡ್ಯಾವು ಆಕಾಶದಾಗ
ಕಪ್ಪು ಮೋಡ ಆವರಿಸ್ಯಾವು ಚುಕ್ಕಿ ಸುತ್ತ
ಮಳೆ ಬರುವ ಚಿಂತಿ ನನ್ನಾಕೆಗ...

ಆಕಾಶದಾಗ ಚುಕ್ಕಿ ಮೂಡಿದ್ರ ಮಳಿಬರುದಿಲ್ಲ.
ಆದ್ರೆ, ನನ್ನಾಕೆ ಎದಿಯಾಗಆತಂಕ ಮುಡೈತಿ

ಮಳೆ ನೋಡು ರೈತರಂಗಈಕಿ ಕಾಳ್ಜಿ.
ಈಕಿ ಜೀವ ಚುಟು..ಚುಟುಅಂತೈತಿ.
ಇದಕ್ಕ ಕಾರಣ ಏನೂ ಇಲ್ಲ.ಯ್ಯಾಕಂದ್ರ ಈಕಿ ಹಿಂಗ.

ಚುಕ್ಕಿಯಂಗ ಮಿನಗ್ತಾಳ..ಮಿಂಚಿನಂಗ ಗುಡಗ್ತಾಳ
ಇಲ್ಲಂದ್ರ ಕರಗಿದ ಮೋಡದಂಗ ಅಳ್ತಾಳ.ಈಕಿ ಹಿಂಗ ರೀ...

- ರೇವನ್

Saturday, July 3, 2010

ಹರೆಯ ಉಕ್ಕಿ...


ರೆಯ ಉಕ್ಕಿತು
ಮೊಡವೆ ಮೂಡಿತು,
ಬದುಕೆಂಬ ಪಯಣದಲ್ಲಿ...

ಕನಸು ಸಾಗಿತು ಒಲವು ಗರಿಗೆದರಿತು
ಹೃದಯ ಭಾವದಲ್ಲಿ...

ನೋವು ಪರಿಚಿತವಾಯಿತು
ನಲಿವು ಅಹ್ಲಾದಕರವೆನಿಸಿತು...

ಯಾಕೋ ಏನೋ..ಇನ್ನು ಅವಳ
ಪ್ರವೇಶವೇ ಆಗಿಲ್ಲ. ದೂರವಿದ್ದಾಳಾ...?
ಹತ್ತಿರ ಬಂದವಳಾ....?????

ಹರೆಯ ಉಕ್ಕಿದೆ..ನಿರೀಕ್ಷೆ ಮೂಡಿದೆ..

- ರೇವನ್

ಒಂದು ಸಾಲು...

ಒಂದೇ ಒಂದು ಸಾಲು..
ಇದು ಅರ್ಥವಾಗುದಿಲ್ಲ.
ಹೃದಯದ ಬಾಗಿಲವನ್ನಂತು ತಟ್ಟುತ್ತದೆ
ಅದು ನನ್ನ ಶ್ರೀದೇವಿಯ ಹುಚ್ಚು ಪ್ರೀತಿಯ ಥರ.

- ರೇವನ್

ಬಾಲ್ಯ..

ಬಾಲ್ಯವೇ ಹಾಗೆ..
ಪ್ರೀತಿಯ ಅಮ್ಮನ ಗದರಿಕೆ
ಕೊಂಚ ಭಯವಿದ್ದರೂ ಅದು ತಾತ್ಕಾಲಿಕ.

ಬಾಲ್ಯದ ಆಟ-ಪಾಠ ಚೆಂದ
ಅದ್ಯಾರೊ ಕಾಡುತ್ತಾರೆಂಬ ಚಿಂತೆಯಿಲ್ಲ.
ಅವಳು ಚೇಡಿಸುತ್ತಾಳೆಂಬ ಪ್ರೀತಿ ತುಂಬಿದ ಭಯವೂ ಇಲ್ಲ.

ಏನೇ ಇದ್ದರೂ ಬಾಲ್ಯದಲ್ಲಿ ಸ್ವಚ್ಛದ ಆಕಾಶ..ನೀಲಾಕಾಶ
ತಿಳಿ..ತಿಳಿ ನೀರ ಕೊಳದ ಪ್ರಶಾಂತೆಯಂತೆ.
ನೋವಿಲ್ಲ..ಅರಿವಿಲ್ಲ. ಏನೇ ಇದ್ದರೂ ಅದು ಮುಗ್ಧತೆ ಮತ್ತು ಮುಗ್ಧತೆ.

-ರೇವನ್

Monday, January 4, 2010

ಕವಿ ಮನಸ್ಸು...

ಮನದಲ್ಲಿ ನೋವಿದೆ. ಭಾವಗಳು
ಅಕ್ಷರವಾಗದಷ್ಟು ಘಾಡವಾದ ಪೆಟ್ಟು.

ಮನವು ಕೊರಗುತ್ತಿದೆ. ನೋವಿನಿಂದಲ್ಲ.
ಭಾವನೆಗಳು ಸಾಲುಗಳಾಗದೇ ಇರುವುದಕ್ಕೆ.

ನೋವು ಮನವಾಗಿದೆ. ಮನವೆಲ್ಲ ನೋವೇ
ಆಗಿದೆ. ಅವಳು ಕೊಟ್ಟು ಹೋದ ಪೆಟ್ಟು..
ಮತ್ತೆ ಮತ್ತೆ ತಾಜಾ ಆಗ್ತಿದೆ..

ಮನವು ನೋವಾಗಿದೆ.. ಅವಳನ್ನ ಕಂಡ ಕ್ಷಣದಿಂದ....

- ರೇವನ್

Saturday, January 2, 2010

ನೀಲಾಕಾಶ...

ೀಲಾಕಾಶಕ್ಕೆ ಮನಸೋತೆ.
ಅವಳ ಕಣ್ಣಲ್ಲೂ ಅದೇ ಚೆಲುವೆ ಕಂಡೆ.

ನೀಲಾಕಾಶಕ್ಕೆ ಮನನೊಂದೆ.
ಅಲ್ಲಿ ಕಂಡ ಮೋಡ. ಅದರಿಂದ
ಉದುರಿದ ಹನಿ..ಹನಿ ನೀರು
ಅವಳ ಕಣ್ಣಲ್ಲೂ ಕಂಡೆ.

ನೀಲಾಕಾಸಕ್ಕೆ ಮನಸೋತೆ.
ಅವಳಿಗೂ ಮನಸೋತೆ.
ಆದ್ರೆ, ಅವಳು ಈಗ
ನಿಜಕ್ಕೂ ಆಕಾಶದಷ್ಟೇ ದೂರ..ದೂರ.

-ರೇವನ್

Friday, January 1, 2010

ನನ್ನ ಹುಡುಗಿ ಭಾಷೆ ಬದಲಾಗಿದೆ...

ನನ್ನವಳ ಭಾಷೆ ಈಗ ಬದಲು.
ಅದು ಕನ್ನಡವೇ . ಆದ್ರೆ, ಅದಕ್ಕೆ

ಬೆಂಗಳೂರು ಸ್ಷರ್ಶ ಬಂದು ಬಿಟ್ಟಿದೆ.
ನನ್ನವಳ ಹಾವ-ಭಾವ. ಇವು ಬೇರೆ
ರೂಪ ಪಡೆದಿಲ್ಲ. ಅದೇ ಸರಳತೆ.
ಅದೇ ಮುಗ್ಧತೆ.


ನನ್ನವಳ ಆಕಾರ-ವಿಕಾರವಾಗಿಲ್ಲ.
ಅಲಲ್ಲಿ ತುಂಬಿ ಕೊಳ್ಳುತ್ತಿರುವ ಯೌವ್ವನ.
ಮತ್ತಷ್ಟು-ಇನ್ನಷ್ಟು ಚೆಂದ ಕಾಣ್ತಾಯಿದ್ದಾಳೆ.

ಭಾಷೆ ಮಾತ್ರ ಬದಲು. ಇದು ಏನಕ್ಕೆ.
ಗೊತ್ತಿಲ್ಲ. ಉತ್ತರದ ಕನ್ನಡಕ್ಕೆ. ಸದ್ಯ
ಬೆಂಗಳೂರು ಕನ್ನಡದ ಮಿಶ್ರಣ....
-ರೇವನ್....